ಭಾಷೆ
ಕನ್ನಡದ ಉಪಭಾಷೆಗಳು

ಕನ್ನಡದ ಉಪಭಾಷೆಗಳನ್ನು ಮೂರು ನೆಲೆಗಳಿಂದ ಪರಿಶೀಲಿಸಬಹುದು. ಅವು ಚಾರಿತ್ರಿಕ, ಭೌಗೋಳಿಕ ಮತ್ತು ಸಾಮಾಜಿಕ ನೆಲೆಗಳು. ಮೊದಲನೆಯದು ಇಂದು ಪ್ರಚಲಿತವಾಗಿರುವ ಉಪಭಾಷೆಗಳು ಬೆಳೆದುಬಂದ ಬಗೆಯನ್ನು ಅಭ್ಯಾಸ ಮಾಡುತ್ತದೆ ಮತ್ತು ಪ್ರಾಚೀನ ಕನ್ನಡದ ಪಠ್ಯಗಳಲ್ಲಿ ಹೆಸರಿಸಿರುವ ಅಂದಿನ ಉಪಭಾಷೆಗಳ ಸ್ವರೂಪದ ಬಗೆಗಿನ ಊಹೆ-ಮರುರಚನೆಗಳಲ್ಲಿ ತೊಡಗಿಕೊಳ್ಳುತ್ತದೆ. ಭೌಗೋಳಿಕ ಅಥವಾ ಪ್ರಾದೇಶಿಕ ಉಪಭಾಷೆಗಳ ಅಧ್ಯಯನವು ಇದು ಬಳಕೆಯಾಗುತ್ತಿರುವ ಉಪಭಾಷೆಗಳ ಸ್ಥೂಲ ಪರಿಚಯ ಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಅವುಗಳ ಒಳಗೆ ನಡೆಯುತ್ತಿರುವ ಬದಲಾವಣೆಗಳನ್ನೂ ಪರಿಶೀಲಿಸುತ್ತದೆ. ಸಾಮಾಜಿಕ ಉಪಭಾಷೆಗಳ ಅಧ್ಯಯನವು ಒಂದೇ ಪ್ರದೇಶ ಮತ್ತು ಕಾಲದಲ್ಲಿ ಬೇರೆ ಬೇರೆ ಸಾಮಾಜಿಕ ವರ್ಗಗಳಿಗೆ ಸೇರಿದವರು ಬಳಸುವ ಭಾಷೆಯ ಬಗೆಗಳ ಕಡೆಗೆ ಗಮನ ಹರಿಸುತ್ತದೆ. ಸಮಾಜದೊಳಗಿರುವ ಮೇಲು ಕೀಳುಗಳ ವಿಚಾರವು ಭಾಷೆಗಳಲ್ಲಿಯೂ ಶ್ರೇಣೀಕರಣಕ್ಕೆ ಕಾರಣವಾಗಿರುವುದನ್ನು ಇಲ್ಲಿ ಗಮನಿಸುತ್ತೇವೆ. ಕೆಲವು ಉಪಭಾಷೆಗಳು ಅಂಚಿನಲ್ಲಿಯೇ ಉಳಿದು ಬೇರೆ ಕೆಲವು ಕೇಂದ್ರಕ್ಕೆ ಬರುವುದನ್ನು ಕೂಡ ಇಲ್ಲಿ ನೋಡಬಹುದು. ಒಂದು ಕಾಲದಲ್ಲಿ ಉಪಭಾಷೆಗಳೆಂದು ತಿಳಿಯಲಾಗಿದ್ದ ಬಡಗ ಮುಂತಾದವು ಇಂದು ಸ್ವತಂತ್ರ ಭಾಷೆಗಳಾಗಿ ಬೆಳೆದಿವೆ.

ಒಂಬತ್ತನೆಯ ಶತಮಾನದಲ್ಲಿ ರಚಿತವಾದ ಕವಿರಾಜಮಾರ್ಗವು ಕನ್ನಡದಲ್ಲಿ ಉತ್ತರ ಮಾರ್ಗ ಮತ್ತು ದಕ್ಷಿಣ ಮಾರ್ಗಗಳನ್ನು ಗುರುತಿಸಿ, ಅವು ಕನ್ನಡದ ಪ್ರಮುಖ ಪ್ರಾದೇಶಿಕ ಪ್ರಭೇದಗಳೆಂದು ಹೇಳುತ್ತದೆ. ಆದರೆ, ಆ ಕೃತಿಯನ್ನು ಬರೆದ ಶ್ರೀವಿಜಯನು ಕನ್ನಡದಲ್ಲಿರುವ ಅಸಂಖ್ಯಾತ ಉಪಭಾಷೆಗಳನ್ನು ಹೆಸರಿಸಲು ಸಾವಿರ ನಾಲಿಗೆಗಳಿರುವ ಆದಿಶೇಷನಿಗೂ ಸಾಧ್ಯವಿಲ್ಲವೆಂದು ಹೇಳುತ್ತಾನೆ. ಅವನು ಕೊಪಣ, ಪುಲಿಗೆರೆ, ಕಿಸುವೊಳಲು, ಒಕ್ಕುಂದ ಮುಂತಾದ ಕೆಲವು ಪಟ್ಟಣಗಳನ್ನು ಆರಿಸಿಕೊಂಡು, ಅವುಗಳಿಂದ ಸುತ್ತುವರಿಯಲ್ಪಟ್ಟ ಪ್ರದೇಶದಲ್ಲಿ ಬಳಸುವ ಭಾಷೆಯೇ ಕನ್ನಡದ ತಿರುಳು ಎಂದು ಘೋಷಿಸುತ್ತಾನೆ. ಇದನ್ನು ಪ್ರಮಾಣೀಕರಣದ ಪ್ರಯತ್ನವೆಂದು ಕರೆಯಬಹುದು. ತುಂಗಭದ್ರಾ ನದಿಯು ಕನ್ನಡದ ದಕ್ಷಿನ ಮತ್ತು ಉತ್ತರ ಮಾರ್ಗಗಳನ್ನು ಬೇರ್ಪಡಿಸುವ ಗಡಿಯೆಂದು ತಿಳಿಯಲಾಗಿದೆ.

ಡಿ.ಎನ್. ಶಂಕರ ಭಟ್ ಈ ವಿಚಾರಗಳನ್ನು ಒಪ್ಪಿಕೊಂಡರೂ, ತಮ್ಮ ಕನ್ನಡ ಭಾಷೆಯ ಕಲ್ಪಿತ ಚರಿತ್ರೆ ಎಂಬ ಪುಸ್ತಕದಲ್ಲಿ ಬಹಳ ಕುತೂಹಲಕಾರಿಯಾದ ವಿಚಾರವನ್ನು ಮಂಡಿಸುತ್ತಾರೆ. ಅವರ ಪ್ರಕಾರ ಕನ್ನಡದ ಪೂರ್ವ ಮತ್ತು ಪಶ್ಚಿಮ ಪ್ರಭೇದಗಳ ನಡುವಿನ ಅಂತರವು ಹೆಚ್ಚು ಹಳೆಯದು ಮತ್ತು ಮುಖ್ಯವಾದುದು. ಅವರು, ಕರಾವಳಿ ಕನ್ನಡದ ಉಪಭಾಷೆಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ. ಮೊದಲನೆಯದು, ಕನ್ನಡವನ್ನು ಕೇವಲ ದ್ವಿತೀಯ ಭಾಷೆಯಾಗಿ ಬಳಸುವ ತುಳು, ಕೊಂಕಣಿ, ಮರಾಠಿ, ಮಲೆಯಾಳಂ ಮುಂತಾದವುಗಳನ್ನು ತಾಯಿನುಡಿಯಾಗಿ ಹೊಂದಿರುವವರು ಬಳಸುವ ಕನ್ನಡ. ಎರಡನೆಯದು, ಕನ್ನಡದ್ದೇ ಒಂದಲ್ಲ ಒಂದು ಬಗೆಯನ್ನು ತಮ್ಮ ಆಡುನುಡಿಯಾಗಿ ಹೊಂದಿರುವವರು ಬಳಸುವ ಕನ್ನಡ. ಗೌಡ ಕನ್ನಡ, ಹಾಲಕ್ಕಿ ಕನ್ನಡ, ಹವ್ಯಕ ಕನ್ನಡ, ಕೋಟ ಕನ್ನಡ, ಕುಂಬಾರ ಕನ್ನಡ ಮುಂತಾದ ಬಗೆಗಳನ್ನು ಉಪಯೋಗಿಸುವವರು ಈ ಗುಂಪಿಗೆ ಸೇರುತ್ತಾರೆ. ಈ ಬಗೆಯ ಕನ್ನಡಗಳನ್ನು ಬಳಸುವವರು, a ಒಂದು ಸಾವಿರ ವರ್ಷಗಳ ಹಿಂದೆಯೇ ಕನ್ನಡದ ಪ್ರಧಾನ ಧಾರೆಯಿಂದ ಬೇರ್ಪಟ್ಟವರೆಂದು ಶಂಕರಭಟ್ಟರು ಹೇಳುತ್ತಾರೆ. ಈ ಭಾಷೆಗಳು ಪ್ರಾಚೀನ ಕನ್ನಡದ ಅನೇಕ ಪದಗಳು ಮತ್ತು ವ್ಯಾಕರಣರೂಪಗಳನ್ನು ಇಂದಿಗೂ ಉಳಿಸಿಕೊಂಡಿವೆಯೆಂದು ಅವರ ಅಭಿಪ್ರಾಯ. ಇವಕ್ಕೆ ಹೋಲಿಸಿದರೆ, ಹೆಚ್ಚು ವೇಗವಾಗಿ ಬದಲಾಗಿರುವ ಪಶ್ಚಿಮ ಕರ್ನಾಟಕದ ಉಪಭಾಷೆಗಳಲ್ಲಿ ಈ ಹಳೆಯ ರೂಪಗಳು ಉಳಿದಿಲ್ಲ. ಅವರು, ತಮ್ಮ ಊಹೆಗೆ ನೆರವಾಗುವ ಅನೇಕ ಉದಾಹರಣೆಗಳನ್ನು ನೀಡಿದ್ದಾರೆ. ಈ ಉಪಭಾಷೆಗಳ ಆಳವಾದ ಅಧ್ಯಯನವು ಕನ್ನಡದ ಚರಿತ್ರೆಯನ್ನು ಕುರಿತ ಮುಖ್ಯವಾದ ವಿಚಾರಗಳನ್ನು ತಿಳಿಸಬಹುದು.

ಆದರೆ, ಹೆಚ್ಚು ಸಾಂಪ್ರದಾಯಿಕವಾದ ನಿಲುವುಗಳನ್ನು ಹೊಂದಿರುವ ಭಾಷಾಶಾಸ್ತ್ರಜ್ಞರು ಬಹಳ ಸ್ಥೂಲವಾದ ನಾಲ್ಕು ಪ್ರಾದೇಶಿಕ ಪ್ರಭೇದಗಳನ್ನು ಗುರುತಿಸಿದ್ದಾರೆ. ಅವು ಮೈಸೂರು ಕನ್ನಡ, ಮಂಗಳೂರು ಕನ್ನಡ, ಧಾರವಾಡ ಕನ್ನಡ ಮತ್ತು ಗುಲ್ಬರ್ಗ ಕನ್ನಡಗಳು. ಸಹಜವಾಗಿಯೇ ಈ ನಾಲ್ಕು ಪ್ರಭೇದಗಳೊಳಗೆ ಅನೇಕ ಚಿಕ್ಕ ಉಪಭಾಷೆಗಳಿವೆ. ಅವುಗಳಿಗೆ ತಮ್ಮದೇ ಆದ ಲಕ್ಷಣಗಳಿವೆ. ಹೀಗೆ ಆಗಲು ಉಪಭಾಷೆಗಳು ತಮ್ಮ ಗದಿಯಲ್ಲಿರುವ ಬೇರೆ ಭಾಷೆಗಳಿಂದ ಪ್ರಭಾವಿತವಾಗುವುದೂ ಕಾರಣ. ತೆಲುಗು, ತಮಿಳು, ಮರಾಠಿ, ಮಲೆಯಾಳಂ ಭಾಷೆಗಳು ತಮಗೆ ಸಮೀಪದಲ್ಲಿರುವ ಕನ್ನಡಿಗರ ಪದಕೋಶವನ್ನು ವ್ಯಾಪಕವಾಗಿ ಮತ್ತು ವ್ಯಾಕರಣವನ್ನು ಆಂಶಿಕವಾಗಿ ಪ್ರಭಾವಿಸಿರುತ್ತವೆ. ಈ ಪ್ರಾದೇಶಿಕ ಉಪಭಾಷೆಗಳ ನಡುವಿನ ಅಂತರವನ್ನು ಸಾಕಷ್ಟು ವಿವರವಾಗಿ ದಾಖಲೆ ಮಾಡಲಾಗಿದೆ. ಇನ್ನೊಂದು ಸಂಗತಿಯೆಂದರೆ, ನಮ್ಮ ಸಮಾಜದಲ್ಲಿರುವ ಕೇಂದ್ರೀಕರಣ ಮತ್ತು ಮೇಲು ಕೀಳುಗಳ ಕಲ್ಪನೆಯ ಪರಿಣಾಮವಾಗಿ, ಬೆಂಗಳೂರು-ಮೈಸೂರುಗಳು ಹಾಗೂ ಪಟ್ಟಣಗಳಲ್ಲಿ ಮಾತನಾಡುವ ಕನ್ನಡಕ್ಕೂ ಕರ್ನಾಟಕದ ಬೇರೆ ಪ್ರದೇಶಗಳಲ್ಲಿ ಬಳಸುವ ಕನ್ನಡಕ್ಕೂ ಬಹಳ ಅಂತರ ಉಂಟಾಗಿದೆ. ಈ ಬಗೆಯ ಉಪಭಾಷೆಗಳ ಆಡುಮಾತುಗಳು ಗೇಲಿಗೆ ಗುರಿಯಾಗಿ, ಬಳಕೆಯಾಗದೆ ಉಳಿದಿರುವ ಸಂಭವಗಳೂ ಇವೆ. ಇಂತಹ ಕಡೆ ಪ್ರಮಾಣಭಾಷೆಯ ಅಧಿಕಾರವೇ ನಡೆಯುತ್ತದೆ.

ಸಾಮಾಜಿಕ ಉಪಭಾಷೆಗಳು ಮಾತನಾಡುವ ಸಮುದಾಯಗಳ ಜಾತಿ, ಲಿಂಗ ಹಾಗೂ ಸಾಮಾಜಿಕ ಸನ್ನಿವೇಶವನ್ನು ಅವಲಂಬಿಸಿ ಕಾಲಾನುಕ್ರಮದಲ್ಲಿ ರೂಪುಗೊಳ್ಳುವ ಭಾಷಾಪ್ರಭೇದ. ಸಮಾಜದಲ್ಲಿ ಉನ್ನತವೆಂದು ಪರಿಗಣಿತವಾದ ಸಮುದಾಯದ ಭಾಷೆಯು ಶಿಷ್ಟ ಭಾಷೆ, ಪ್ರಮಾಣ ಭಾಷೆ ಮುಂತಾದ ಸ್ಥಾನಗಳನ್ನು ಪಡೆಯುತ್ತದೆ. ಒಂದೇ ಪ್ರದೇಶದಲ್ಲಿ ಖಚಿತವಾದ ಪ್ರಾದೇಶಿಕ ಉಪಭಾಷೆಯು ಇರುವಂತೆಯೇ ಅನೇಕ ಸಾಮಾಜಿಕ ಪ್ರಭೇದಗಳೂ ಇರುತ್ತವೆ. ಕಲಾತ್ಮಕ ಅಭಿವ್ಯಕ್ತಿಯು(ಸಾಹಿತ್ಯ) ಇವುಗಳಲ್ಲಿ ಯಾವುದೋ ಒಂದು ಪ್ರಭೇದವನ್ನು ತನ್ನ ಕಚ್ಚಾವಸ್ತುವಾಗಿ ಆರಿಸಿಕೊಳ್ಳುತ್ತದೆ. ಅನಂತರ, ಲೇಖಕನು ತನ್ನ ಪ್ರತಿಭೆಯನ್ನು ತನ್ನ ಪ್ರತಿಭೆಯನ್ನು ಬಳಸಿಕೊಂಡು ತನಗೇ ವಿಶಿಷ್ಟವಾದ ಶೈಲಿಯನ್ನು ರೂಪಿಸಿಕೊಳ್ಳುತ್ತಾನೆ.

 

ಮುಂದಿನ ಓದು:

    1. ಉಪಭಾಷೆಗಳು, ಕೃಷ್ಣಪರಮೇಶ್ವರಭಟ್ಟ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
    2. ಕನ್ನಡ ಜಗತ್ತು: ಅರ್ಧ ಶತಮಾನ, ಕೆ.ವಿ.ನಾರಾಯಣ, 2007, ಕನ್ನಡ ವಿಶ್ವವಿದ್ಯಾಲಯ, ಹಂಪಿ.
    3. ಕನ್ನಡ ಭಾಷಾಶಾಸ್ತ್ರ, ಆರ್. ವೈ. ಧಾರವಾಡಕರ್, ಧಾರವಾಡ
    4. ಕನ್ನಡ ಭಾಷಾಸ್ವರೂಪ, ಕೆ.ಎಂ. ಕೃಷ್ಣರಾವ್, ಬೆಂಗಳೂರು
    5. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಡಿ.ಎನ್. ಶಂಕರ ಭಟ್, ಕನ್ನಡ ವಿಶ್ವವಿದ್ಯಾಲಯ, ಹಂಪಿ
    6. ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಎಂ.ಎಚ್.ಕೃಷ್ಣಯ್ಯ, ಬೆಂಗಳೂರು
    7. ‘Kannada: A Cultural Introduction to the Spoken Styles of the Language’, by William McCormack, M.G. Krishnmurthy, Contributor: M.G. Krishnmurthy, 1966, University of Wisconsin Press.
    8. ‘An Outline Grammar of Havyaka’ by D.N. Shankara Bhat, 1971, Deccan College Post Graduate and Research Institute, Poona.
    9. ‘A Comparative Study of Kannada Dialects: Bellary, Gulbarga, Kumta and Nanjanagud Dialects’ by U. Padmanabha Upadhyaya, 1976, University of Mysore, Mysore.
    10. ‘Clause Structure of Northern Havyaka Kannada, Dravidian: A Tagmemic Analysis’ by Helen E. Ullrich, 1980, Dravidian Lingustics Association
    11. ‘A Reference Grammar of Spoken Kannada’ by Schiffman, Harold, 1979, University of Washington
    12. ‘The Havyaka Dialect of North Kannada’ by K.G. Shastry, 1971, Karnataka Unversity, Dharawar
    13. ‘Gowda Kannada’, K.K. Gowda, 1976, Annamalai University
    14. ‘Halakki Kannada’, Acharya A.S., 1967, Deccan College Post graduate and Research Institute, Poona
    15. ‘Coorg Kannada( Jenu Kuruba Dialect)’ by U.P. Upadhyaya, 1971, Same as above.
    16. ‘The Dravidian Languages’ by Bhadriraju Krishnamurthy, 2003, Cambridge University Press

ಮುಖಪುಟ / ಭಾಷೆ